ಜಕರಂಡ
ಬಿಗ್ನೊÃನಿಯೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ವೃಕ್ಷ. ಇದರಲ್ಲಿ ಸುಮಾರು ೫೦ ಪ್ರಭೇದಗಳಿವೆ. ಮುಖ್ಯವಾದವು ಮಿಮೋಸೀಫೋಲಿಯ (ಒವ್ಯಾಲಿಫೋಲಿಯ), ಕಸ್ಪಿಡಿಫೋಲಿಯ, ಕೀಲೋನಿಯ ಮತ್ತು ಅಕ್ಯೂಟಿಫೋಲಿಯಗಳು. ನೀಲಾಪಾದರಿ, ನೀಲಿ ಗುಲ್‌ಮೊಹರ್ ಮುಂತಾದ ಹೆಸರುಗಳೂ ಇದಕ್ಕೆ ಉಂಟು. ಬ್ರಜಿûಲ್ ಇದರ ತವರು. ಧೂಮ್ರವರ್ಣಮಿಶ್ರಿತ ನೀಲಿ ಬಣ್ಣದ ಹೂಗಳು ಮತ್ತು ಜರೀಗಿಡಗಳ ಎಲೆಗಳಂತೆ ಛಿದ್ರವಾಗಿರುವ ದ್ವಿಪಿಚ್ಛಕ ಎಲೆಗಳಿಂದ ಕೂಡಿದ್ದು ಬಲುಸೊಗಸಾಗಿ ಕಾಣುತ್ತದೆ. ಜಕರಂಡವನ್ನು ದಕ್ಷಿಣ ಅಮೆರಿಕ, ಅಮೆರಿಕ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯ, ಪ್ಲಾರಿಡ ಪ್ರಾಂತ್ಯಗಳು ಮತ್ತು ಭಾರತದ ಹಲವಾರು ರಾಜ್ಯಗಳ ಉದ್ಯಾನಗಳಲ್ಲಿ ರಸ್ತೆಗಳ ಅಕ್ಕಪಕ್ಕಗಳಲ್ಲಿ ಚೆಲುವಿಗಾಗಿ ಬೆಳೆಸುತ್ತಾರೆ. ಜರಕಂಡ ಸುಮಾರು ೧೫ ಮೀ. ಎತ್ತರಕ್ಕೆ ಬೆಳೆಯುವ ಮರ. ಇದರ ರೆಂಬೆಗಳು ಒತ್ತಾಗಿರುವುದಿಲ್ಲ. ಹೂಗಳು ಅರಳುವ ಮುನ್ನ ಎಲೆಗಳೆಲ್ಲ ಉದುರಿ ಹೋಗುತ್ತವೆ. ಹೂ ಅರಳುವ ಕಾಲ ಮಾರ್ಚಿಯಿಂದ ಮೇ ಕೊನೆಯವರೆಗೆ, ಹೂಗಳು ರೆಂಬೆಗಳ ತುದಿಗಳಲ್ಲಿನ ಪ್ಯಾನಿಕಲ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಒಂದೊಂದರಲ್ಲೂ ೫ ಪುಷ್ಪಪತ್ರಗಳು, ೫ ದಳಗಳು, ೪ ಕೇಸರಗಳು, ಉಚ್ಚಸ್ಥಾನದ ೨ ಕಾರ್ಪೆಲುಗಳಿಂದ ಕೂಡಿದ ಒಂದು ಅಂಡಾಶಯ ಇವೆ. ದಳಗಳು ಸಂಯುಕ್ತ ಬಗೆಯವು. ದಳಸಮೂಹ ಕೊಳವೆಯಾಕಾರದಲ್ಲಿದೆ ಇದರ ಮುಂತುದಿ ೨ ತುಟಿಗಳಾಗಿ ವಿಭಾಗವಾಗಿದೆ. ಫಲ ಸಂಪುಟ ಮಾದರಿಯದು; ಚಪ್ಪಟೆಯಾಗಿಯೂ ಚಕ್ರಾಕಾರವಾಗಿಯೂ ಇದೆ. ಬೀಜಗಳು ಅಸಂಖ್ಯ ಇವಕ್ಕೆ ತೆಳುವಾದ ಪೊರೆಯಂಥ ರೆಕ್ಕೆ ಉಂಟು.

	ಜಕರಂಡವನ್ನು ಬೀಜ ಇಲ್ಲವೆ ಅರೆಬಲಿತ ಕಾಂಡತುಂಡುಗಳಿಂದ ವೃದ್ಧಿಸಲಾಗುತ್ತದೆ. ಇತ್ತಿÃಚೆಗೆ ಅಮೆರಿಕದ ಫ್ಲಾರಿಡ ರಾಜ್ಯದಲ್ಲಿ ಕಣ್ಣು ಕಸಿವಿಧಾನದಿಂದ ಸಣ್ಣ ಸಸಿಗಳನ್ನು ಪಡೆದು ಬೆಳೆಸುವ ಕ್ರಮ ಜಾರಿಗೆ ಬರುತ್ತಿದೆ. ಜಕರಂಡದ ಬೆಳವಣಿಗೆ ಬಹಳ ಶೀಘ್ರ. ಸುಮಾರು ೫ ವರ್ಷ ವಯಸ್ಸಾದ ಮೇಲೆ ಹೂಬಿಡಲು ಆರಂಭಿಸುತ್ತದೆ. ಆದರೆ ೧೫ ವರ್ಷಗಳ ಅನಂತರ ಹೂಗಳು ಕಡಿಮೆಯಾಗುತ್ತ ಬರುತ್ತವೆ. ಆಗ ಮರಗಳನ್ನು ಬದಲಿಸುವುದು ಒಳ್ಳೆಯದು. ಜಕರಂಡದ ಎಲೆಗಳನ್ನು ಎದೆಸಂಬಂಧ ರೋಗಗಳಿಗೂ ಗಾಯಗಳಿಗೆ ಹಚ್ಚಲೂ ಬಳಸುತ್ತಾರೆ. ಇದರ ಚೌಬೀನೆ ಗಟ್ಟಿಯಾದುದೂ ಭಾರವಾದುದೂ ನಯರಚನೆಯುಳ್ಳದ್ದೂ ಆಗಿರುವುದರಿಂದ ಇದನ್ನು ಉಪಕರಣಗಳ ಹಿಡಿ ಮಾಡಲು ಉಪಯೋಗಿಸುವುದುಂಟು.
(ಎಸ್‌ಐ.ಎಚ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ